ಕಲ್ಪನ

ನಾನು ನನ್ನ ಮಗಳು ಹೊರಗೆ ಹೊರಡುವದು ಕಡಿಮೆ. ನಮಗೆ ಮನೆಯೇ ಪ್ರಪಂಚ. ಅದರಲ್ಲೂ ನಾನು ಹೆಸರಿಗೆ ತಕ್ಕಂತೆ ಭಾವನಾಜೀವಿ . ಅನಿವಾರ್ಯವಿದ್ದರೆ ಮಾತ್ರ ಹೊರಡುವದು ಅದೂ ಒಲ್ಲದ ಮನಸ್ಸಿನಿಂದ. ಹೀಗೆ ಒಂದು ದಿನ ಮನೆಗೆ ಬೇಕಾದ ಕೆಲವು ಸಾಮಾನುಗಳ ಖರೀದಿಗೆಂದು ನಾನು ನನ್ನ ಪತಿ ಹೊರಟೆವು ಮಗಳು ನಮ್ಮ ಜೊತೆಗೂಡಿದಳು ಅವಳಿಗೂ ಕೆಲವು ಶಾಪಿಂಗ್ ಮಾಡಬೇಕಿತ್ತು, ಇಲ್ಲದಿದ್ದರೆ ಜಪ್ಪಯ್ಯ ಎಂದರೂ ಅವಳು ಹೊರಡುವದಿಲ್ಲ!..

ಮನೆಯ ಸಾಮಾನುಗಳ ಖರೀದಿ ಮುಗಿಸಿ ಮಗಳ ಸಾಮಗ್ರಿಗಳ ಖರೀದಿಗೆ ಕಾರು ಹತ್ತಿದೆವು. ಸ್ವಲ್ಪ ಮುಂದೆ ಹೋದ ಮೇಲೆ ಪತಿ ಕಾರನ್ನು ಒಂದು ಕಡೆ ನಿಲ್ಲಿಸಿ ಮಗಳನ್ನು ಕರೆದುಕೊಂಡು  ಹೊರಟರು. 

ಶಾಪಿಂಗನಲ್ಲಿ ನನ್ನ ಉಪಸ್ಥಿತಿಯ ಪ್ರಾಮುಖ್ಯತೆ ಇಲ್ಲದ್ದರಿಂದ ನಾನು ಕಾರಿನಲ್ಲಿಯೇ ಕುಳಿತಿರುತ್ತೇನೆಂದೆ.
    ಕಾರು ನಿಲ್ಲಿಸಿದ್ದ ಜಾಗದಿಂದ ಕಾಲ್ನಡಿಗೆ ಅಂತರದಲ್ಲಿ ಕಾಲು ಎಕರೆಗೂ ಕಡಿಮೆ ಜಾಗದಲ್ಲಿ ತುಂಬಾ ಮರಗಳು ಬೆಳೆದಿದ್ದವು. ಅದು ಕಾಡಲ್ಲದಿದ್ದರೂ ತುಸು ಹೆಚ್ಚೇ ಎನ್ನುವಷ್ಟು ಮರಗಳ ಒಕ್ಕೂಟವಿತ್ತು. ಸಂಜೆ ೫ ರ ಸಮಯ ಹೆಚ್ಚು ಚುರುಕಲ್ಲದ ಬಿಸಿಲು ಮರಗಳ ಮದ್ಯದಲ್ಲಿ ಚೆಲ್ಲಾಟವಾಡುತ್ತ ಭೂಮಿಯನ್ನು ಚುಂಬಿಸುತ್ತಿತು. ನೋಡಲು ತುಂಬಾ ಮನೋಹರವಾಗಿತ್ತು. ಪತಿ ಮತ್ತು ಮಗಳು ಬರುವವರೆಗೆ ಕಾರಲ್ಲಿ ಕುಳಿತುಕೊಳ್ಳಲು ಬೇಸರವೆನಿಸಿ ಮರಗಳನ್ನು ನೋಡುತ್ತಾ ನಿಲ್ಲೋಣವೆಂದು ಆ ಜಾಗದ ಹತ್ತಿರ ಬಂದೆನು. ಆಗ "ಬನ್ನಿ" ಎಂದ ಹಾಗೆ ಕೇಳಿಸಿತು, ನನಗೆ ಹೇಳಿದರೇನೋ ಎಂಬ ಭ್ರಮೆಯಾಯಿತು. ತುಸು ಮುಂದೆ ಹೋಗಿ ಒಂದು ಮರವನ್ನು ಮುಟ್ಟಲು ಹೋದೆನು ಆಗ "ಬೇಡಮ್ಮಾ ಅದರಲ್ಲಿ ಕಚ್ಚುವ ಇರುವೆಗಳು ಜಾಸ್ತಿ " ಎಂದು ಒಬ್ಬ ಮಹಿಳೆಯ ದ್ವನಿ ಕೇಳಿಸಿತು. ಗಮನವಿಟ್ಟು ಮರವನ್ನು ನೋಡಿದಾಗ ನಿಜವಾಗಲೂ ಮರದ ಬಣ್ಣದ್ದೇ ಆದ ಸಣ್ಣ ಇರುವೆಗಳು ಹರಿದಾಡುತ್ತಿದ್ದವು. ಮಹಿಳೆ ನನಗೆ ಹೇಳಿದ್ದು ಎಂದು ಖಾತ್ರಿಯಾಗಿ ಖುಷಿಯಾಯಿತು. ಆ ಧ್ವನಿ ಆತ್ಮೀಯವೆನಿಸಿತು. ಅವರದೇ ಜಾಗ ಇರಬಹುದು ಆ ಮಹಿಳೆಯನ್ನು ಮಾತನಾಡಿಸಿ "ಜಾಗ ತುಂಬಾ ಚೆನ್ನಾಗಿದೆ ತುಂಬಾ ಗಿಡಗಳನ್ನು ಬೆಳೆಸಿದ್ದೀರಿ ಚಿಕ್ಕ ಕಾಡಿನ ಹಾಗೆ ಕಾಣಿಸುತ್ತದೆ"ಎಂದು ಹೊಗಳಬೇಕೆನಿಸಿ ಸುತ್ತಲೂ ನೋಡಿದೆ ಅನತಿ ದೂರದಲ್ಲಿ ಪುಟ್ಟ ಮನೆ ಕಾಣಿಸಿತು. ಆ ಮಹಿಳೆ ಮನೆಯಲ್ಲಿರಬಹುದು ಎಂದು ಆ ಕಡೆ ಮರಗಳನ್ನು ನೋಡುತ್ತಾ ಹೊರಟೆ. ಚಿಕ್ಕ ಗಿಡಗಳು ದೊಡ್ಡ ಮರಗಳ ಮದ್ಯದಿಂದ ಆ ಮನೆ ಮಸುಕಾಗಿ ಕಾಣಿಸುತ್ತಿತ್ತು. ಹಾಗೆ ಹೋಗುವಾಗ "ನೋಡಿಕೊಂಡು ಬನ್ನಿ, ಮುಳ್ಳುಗಳು ಬೆಳೆದಿವೆ , ಹುಷಾರಾಗಿ "ಎಂದೆಲ್ಲ ಕೇಳಿದಂತಾಯಿತು ಬೇರೆ ಬೇರೆ ಧ್ವನಿಗಳಿಂದ. ಆ ಮನೆಯಲ್ಲಿ ಮಕ್ಕಳು ದೊಡ್ಡವರು ಸೇರಿ ೪-೫ ಜನರ ಸಂಸಾರವಿರಬಹುದು ಎಂದುಕೊಳ್ಳುತ್ತ ಮನೆಯ ಹತ್ತಿರ ಹೋದೆ, ನೋಡಿದರೆ ಅದು ಸುಸ್ಥಿತಿಯಲ್ಲಿರದ ಮನೆಯಾಗಿತ್ತು. ಜನರ ಇರುವಿಕೆಯ ಲಕ್ಷಣಗಳು ಇರಲಿಲ್ಲ. ನನಗೆ ದಿಗ್ಭ್ರಮೆಯಾಯಿತು ಇಷ್ಟೋತ್ತು  ನ್ನನ್ನ ಜೊತೆ ಮಾತನಾಡಿದ್ದು ಮನುಷ್ಯರಲ್ಲವೇ ? ಎಂದು  ಗೊಂದಲವಾಯಿತು. ಆ ಗೊಂದಲದಲ್ಲಿಯೇ  ಕಾರಿನ ಕಡೆ ಬಂದೆ. ನನ್ನ ಜೊತೆಗಿನ  ಸಂಭಾಷಣೆ ಮರಗಳದ್ದೇ!!  ಎಂಬ ಊಹೆ ಬಲವಾಗಿತ್ತು...... 




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಲೇಶಿಯಾದ ಮರೆಯಲಾಗದ ಸವಿನೆನಪುಗಳು

ಬೆಂಗಳೂರಿನ ಬಸ್ಸಿನ ಪುರಾಣ

ಗೃಹಿಣಿ