ಗೃಹಿಣಿ

 
ಮನೆಯೆಲ್ಲ ಅಸ್ತವ್ಯಸ್ತಗೊಂಡಿತ್ತು ಹಾಗೆಯೆ ಅವಳ ಮನಸ್ಸು ಸಹ. ಪತಿ ಮತ್ತು ಮಗಳ ಮೇಲಿನ ಸಿಟ್ಟು ಕ್ರಮೇಣ ಹತಾಶೆಯ ರೂಪ ಪಡೆದಿತ್ತು. ಮೋಡ ಕವಿದ ದಿಗಂತವನ್ನು ದಿಟ್ಟಿಸುತ್ತಾ ಯೋಚಿಸುತ್ತಿದ್ದಳು "ಯಾಕೆ ನಾನ್ ಹೇಳೋದೆಲ್ಲ ತಪ್ಪು ಅನ್ಸುತ್ತೆ ಇವ್ರಿಬ್ರಿಗೆ "... ?

ಅವಳು ಮಿತಭಾಷಿಯಾದ್ರೂ ಪತಿ ಮತ್ತು ಮಗಳೊಡನೆ ಮಾತ್ರ ಹರಟೆ ಹೊಡೆಯುತ್ತಿದ್ದಳು. ಅವರೊಡನೆ ಮಾತ್ರ ತನ್ನನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಳು. ತುಂಬಾ ಅಲ್ಲದಿದ್ದರೂ ತಕ್ಕ ಮಟ್ಟಿಗೆ ಓದಿದ್ದ ಅವಳಿಗೆ ಕೆಲಸಕ್ಕೆ ಹೋಗಲು ಇಷ್ಟವಿಲ್ಲದೆ ಗೃಹಿಣಿಯಾಗಿ ಮನೆಯನ್ನು ಅಚ್ಚುಕಟ್ಟುತನದಿಂದ ನಿಭಾಯಿಸುತ್ತಿದ್ದಳು. ಚತುರೆ ಚಾಣಾಕ್ಷೆ ಅಲ್ಲದಿದ್ದರೂ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳುವ ಜ್ಞಾನ ಅವಳಲ್ಲಿತ್ತು. ಅದರಂತೆ ತನ್ನ ಅಭಿಪ್ರಾಯಗಳನ್ನು ಅವರಿಬ್ಬರಲ್ಲಿ ಹೇಳುತ್ತಿದ್ದಳು ಆದರೆ ಅವರು ಎಂದೂ ಒಪ್ಪುತ್ತಿರಲಿಲ್ಲ. ಇದು ಸಾಮಾನ್ಯವಾದರೂ ಇಂದು ಮಾತ್ರ ತುಸು ಹೆಚ್ಚೇ ಎನಿಸುವಷ್ಟು ಸಿಟ್ಟು ಹತಾಶೆ ಮನಸ್ಸಿನಿಂದಾಚೆ ಇಣುಕಿತ್ತು. ಅದರ ಪರಿಣಾಮ ಮನೆಯ ಮೇಲಾಗಿತ್ತು ಅಸ್ತವ್ಯಸ್ತವಾಗುವದರ ಮೂಲಕ. 

ಸುಮಾರು ಹೊತ್ತಿನವರೆಗೂ ಹಾಗೆಯೆ ಕುಳಿತಿದ್ದಳು. ದಿಗಂತದಲ್ಲಿ ಮೋಡ ಕರಗಿ ಶುಭ್ರ ಆಕಾಶ ಹೊಳೆಯತೊಡಗಿತ್ತು ಸೂರ್ಯನಿಂದ ಬಳುವಳಿಯಾಗಿ ಪಡೆದ ಹೊಂಬಣ್ಣದೊಡನೆ, ಹಾಗೆಯೆ ಅವಳ ಮನಸ್ಸು ಸಹ. ಸಿಟ್ಟು ಹತಾಶೆ ಪೂರ್ತಿ ಕರಗಿ ಹೋಗಿತ್ತು. ತನ್ನ ಹುಚ್ಚುತನಕ್ಕೆ ತಾನೇ ನಕ್ಕು "ನನ್ನಭಿಪ್ರಾಯ ನನಗ್ ಸರಿ ಅನ್ಸಿದ್ರೆ ಅವರಿಬ್ರಿಗೂ ಸರಿ ಅನ್ಸಬೇಕ್ ಅಂತೇನ್  ಇಲ್ವಲ್ಲ... ನಾನ್ಯಾಕ್ ಅದ್ನ ನಿರೀಕ್ಷಿಸಬೇಕು .. ನನ್ನ ಅಭಿಪ್ರಾಯ ನಂದು ಅವ್ರ ಅಭಿಪ್ರಾಯ ಅವ್ರದು... ". ತಿಳಿಯಾಯಿತು ಮನಸ್ಸು ಹೊಸ ಹುರುಪಿನೊಂದಿಗೆ. ತನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಬೇರೆ ಮಾರ್ಗ ಹುಡುಕಿದಳು. ಪೆನ್  ಮತ್ತು ಡೈರಿ ಅವಳ ಮಾತಿಗೆ ಕಿವಿಯಾದವು. ಅವಳ ಅನಿಸಿಕೆ ಅಭಿಪ್ರಾಯಗಳು ಕಥೆಯ ರೂಪದಲ್ಲಿ ಹೊರಹೊಮ್ಮಿದವು..... 

 






 


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಲೇಶಿಯಾದ ಮರೆಯಲಾಗದ ಸವಿನೆನಪುಗಳು

ಬೆಂಗಳೂರಿನ ಬಸ್ಸಿನ ಪುರಾಣ